ಚಿದಂಬರಂ -
ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಒಂದು ಪಟ್ಟಣ. ಮದ್ರಾಸಿನಿಂದ ದಕ್ಷಿಣ ನೈಋತ್ಯಕ್ಕೆ 122 ಮೈ. ದೂರದಲ್ಲಿ ವೆಳ್ಳಾರ್ ಮತ್ತು ಕೊಲರೂನ್ ನದೀ ಮುಖಗಳ ನಡುವಣ ಬತ್ತದ ಬಯಲಿನಲ್ಲಿ ಬಂಗಾಲ ಕೊಲ್ಲಿಗೆ ಕೆಲವೇ ಮೈಲಿಗಳ ದೂರದಲ್ಲಿ ಇದೆ. ಜನಸಂಖ್ಯೆ 48,819 (1971). ಊರಿಗೆ ಅತ್ಯಂತ ಸಮೀಪದಲ್ಲೇ, ಪುರಾತನ ತೀರ್ಥಕ್ಷೇತ್ರವೆನಿಸಿದ ಸ್ಥಳದಲ್ಲಿ, 1929ರಲ್ಲಿ ಸ್ಥಾಪಿತವಾದ ಅಣ್ಣಾಮಲೈ ವಿಶ್ವವಿದ್ಯಾಲಯವಿದೆ. ಚಿದಂಬರಂನಲ್ಲಿ ನೇಕಾರಿಕೆ ಮುಖ್ಯ ಕಸುಬು. ತಮಿಳುನಾಡಿನ ಯತ್ರಾಸ್ಥಳಗಳಲ್ಲಿ ಶ್ರೀರಂಗಂ ಮತ್ತು ಮಧುರೈಗಳನ್ನು ಬಿಟ್ಟರೆ ಇದೇ ಅತ್ಯಂತ ಪ್ರಖ್ಯಾತ ಯಾತ್ರಾಸ್ಥಳ. ಇಲ್ಲಿ ನಟರಾಜನ ದೇವಾಲಯವಿದೆ. ಶೈವಸಾಹಿತ್ಯದಲ್ಲಿ ಇದು ಕೋಯಿಲ್ ಎಂದು ಪ್ರಸಿದ್ಧವಾಗಿದೆ. ಈ ದೇವಾಲಯಕ್ಕೆ ಯಾವ ವಿಧವಾದ ಆಸ್ತಿಯಾಗಲಿ, ಸರ್ಕಾರದಿಂದ ಬರುವ ಆದಾಯುತವಾಗಲಿ ಇಲ್ಲ. ದೀಕ್ಷಿತರೆಂಬ ಬ್ರಾಹ್ಮಣ ಕುಲದ ಗುಂಪಿಗೆ ಈ ದೇವಾಲಯದ ಒಡೆತನವೂ ಇದರ ಮೇಲಿನ ಎಲ್ಲ ಹಕ್ಕುಗಳೂ ಸೇರಿವೆ. ಬಹು ಹಿಂದಿನಿಂದಲೂ ಗರ್ಭಗೃಹದವರೆಗೂ ಎಲ್ಲರಿಗೂ ಮುಕ್ತವಾಗಿರುವ ದಕ್ಷಿಣ ಭಾರತದ ಕೆಲವೇ ದೇವಾಲಯಗಳಲ್ಲಿ ಇದೂ ಒಂದು.

ಸಂಗಮ್ ಸಾಹಿತ್ಯದಲ್ಲಿ ಚಿದಂಬರದ ಉಲ್ಲೇಖವಿಲ್ಲದ್ದರೂ 7-10 ನೆಯ ಶತಮಾನಗಳ ಶೈವಸಂತರ ಸ್ತೋತ್ರಗಳನ್ನು ಪರಿಶೀಲಿಸಿದಾಗ ಆ ವೇಳೆಗಾಗಲೇ ಅದು ಪ್ರಸಿದ್ಧಿ ಪಡೆದಿತ್ತೆಂಬುದು ತಿಳಿಯುತ್ತದೆ. ಚಿ¾್ದಂಬಲಮ್ (ಸಣ್ಣ ಆಲಯ ಅಥವಾ ಸಭಾಮಂಟಪ), ತಿಲ್ಲೈ (ತಿಲ್ಲೈ ಮರಗಳ ತೋಪು), ಪೊನ್ನಂಬಲಮ್ (ಸ್ವರ್ಣಾಲಯ), ಪೆರುಂಬ¾್ದಪುಲಿಯೂರ್ (ದೊಡ್ಡ ಹಲ್ಲುಗಳುಳ್ಳ ಹುಲಿಯ ಊರು) ಎಂದೆಲ್ಲ ಈ ಸ್ತೋತ್ರಗಳಲ್ಲಿ ಶೈವಸಂತರು ಚಿದಂಬರವನ್ನು ಸ್ತುತಿಸಿದ್ದಾರೆ. ಇಲ್ಲಿ ವಿಷ್ಣುವಿನ ಆಲಯವೂ ಒಂದು ಉಂಟು. ಇದನ್ನು ತಿರುಮಂಗೈ ಆಳ್ವಾರರೂ ಕುಲಶೇಖರರೂ ತಮ್ಮ ಸ್ತೋತ್ರಗಳಲ್ಲಿ ತಿರುಚಿತ್ರಕೂಟಮ್ ಎಂದು ವರ್ಣಿಸಿದ್ದಾರೆ. ಈ ಎರಡೂ ಆಲಯಗಳು ಪರಸ್ಪರರ ಅತಿ ಸಮೀಪದಲ್ಲಿದೆ. ಮಾಣಿಕ್ಯ ವಾಚಕರು ಹಾಗೆ ಹೇಳಿದ್ದಾರೆ. ವಿಷ್ಣುವಿನ ಆಲಯವನ್ನು ಮಾಣಿಕ್ಯವಾಚಕರು ಗೋವಿಂದರಾಜ ಸನ್ನಿಧಿ ಎಂದು ಕರೆಯುತ್ತಾರೆ.

	ಇಲ್ಲಿಯ ಸ್ಥಳಪುರಾಣಗಳಲ್ಲಿ ಪತಂಜಲಿ ಮತ್ತು ವ್ಯಾಘ್ರಪಾದಮಹರ್ಷಿಗಳಿಗೂ ಈ ಸ್ಥಳಕ್ಕೂ ಸಂಬಂಧ ಕಲ್ಪಿಸಲಾಗಿದೆ. ಸಿಂಹವರ್ಮನೆಂಬ ಅರಸ ಕುಷ್ಠರೋಗ ಪೀಡಿತನಾಗಿದ್ದು ಚಿದಂಬರಂ ದೇವಾಲಯದ ಕೊಳದಲ್ಲಿ ಮಿಂದು ಸ್ವರ್ಣದೇಹವನ್ನು ಪಡೆದನೆಂಬುದೊಂದು ಸಾಂಪ್ರದಾಯಿಕ ಕತೆ. ಪಲ್ಲವರ ಅರಸನೊಬ್ಬ ಚಿದಂಬರದ ಶಿವನ ಭಕ್ತನೆಂದು ಶೈವಸಂತರಾದ ಸುಂದರರ್ ಹೇಳಿದ್ದಾರೆ. ಇಲ್ಲಿಯ ವಿಷ್ಣು ದೇವಾಲಯಕ್ಕೆ ಪಲ್ಲವ ಅರಸನೊಬ್ಬ ದಾನಗಳನ್ನು ಮಾಡಿದನೆಂದು ತಿರುಮಂಗೈ ಆಳ್ವಾರರು ಹೇಳಿದ್ದಾರೆ. ಚೋಳರ 1ನೆಯ ಆದಿತ್ಯ (871-907) ಮತ್ತು 1ನೆಯ ಪರಾಂತಕರು (907-955) ದೇವಾಲಯದ ಗರ್ಭಗೃಹಕ್ಕೆ ಚಿನ್ನ ಮುಲಾಮನ್ನು ಮಾಡಿಸಿದಂತೆ ಕಂಡುಬರುತ್ತದೆ. ರಾಜರಾಜ ಚೋಳನ (955-1016) ಕಾಲದಲ್ಲಿ ದೇವಾಲಯದಲ್ಲಿ ಮುಚ್ಚಿದ್ದ ಒಂದು ಕೋಣೆಯಲ್ಲಿ ಕಳೆದುಹೋಯಿತೆಂದು ಭಾವಿಸಲಾಗಿದ್ದ ತೇವಾರಮ್‍ನ ತಾಡವೋಲೆ ಪ್ರತಿ ನಂಬಿ ಅಂಡಾಲ್ ನಂಬಿಗೆ ದೊರೆಯಿತಂತೆ. ಚೋಳರ 1ನೆಯ ರಾಜೇಂದ್ರ ರಾಜಧಾನಿಯನ್ನು ಸಮೀಪದ ಗಂಗೈಕೊಂಡಚೋಳಪುರಕ್ಕೆ ಬದಲಾಯಿಸಿದಾಗ ಚೋಳ ಅರಸರು ಚಿದಂಬರದ ದೇವಾಲಯದೊಡನೆ ಹೆಚ್ಚಿನ ಸಂಬಂಧ ಪಡೆಯುವಂತಾಯಿತು. ಅವರಲ್ಲಿಯೂ 1ನೆಯ ಕುಲೋತ್ತುಂಗ ಅಧಿಕಾರಕ್ಕೆ ಬಂದಾಗಿನಿಂದ (1070) ಚಿದಂಬರದ ಇತಿಹಾಸ ಚೋಳರ ಇತಿಹಾಸವೆನಿಸಿಕೊಂಡಿತು.

	ಮಾಣಿಕ್ಯ ವಾಚಕರ ತಿರುವಾಚಕಂ ತಿರುಚಿರ್ದಂಬಲಮ್‍ಗಳು ಚಿದಂಬರದ ತಿಲೈಯಲ್ಲಿ ರಚಿತವಾದವು. ಶೇಕ್ಕಿಳಾರ್‍ರವರ ತಿರುತ್ತೊಂಡರ್ ಪುರಾಣಂ (ಪೆರಿಯ-ಪುರಾಣಂ) ಚಿದಂಬರದ ಸಾವಿರ ಕಂಬಗಳ ಮಂಟಪದಲ್ಲಿ ಇಮ್ಮಡಿ ಕುಲೋತ್ತುಂಗನ(1133-1150) ಕಾಲದಲ್ಲಿ ರಚಿತವಾಯಿತೆಂದು ಪ್ರತೀತಿ.

	ದೇವಾಲಯ ಬಹಳಮಟ್ಟಿಗೆ 12-13ನೆಯ ಶತಮಾನಗಳಲ್ಲಿ ವಿಸ್ತøತಗೊಂಡಿತು. ಮೊದಲಿನ ಚೋಳರ ಶಾಸನಗಳು ಕೆಲವು ಇಲ್ಲಿ ದೊರೆತಿವೆ. ಆದರೆ ಅವು ಮೊದಲಿದ್ದ ಸ್ಥಳದಲ್ಲೇ ಇರದೆ ಜೀರ್ಣೋದ್ಧಾರ ಸಮಯದಲ್ಲಿ ಸ್ಥಾನಪಲ್ಲಟವಾಗಿರುವ ಕಾರಣ, ಅವುಗಳಲ್ಲಿ ಉಲ್ಲೇಖವಾಗಿರಬಹುದಾದ ಕಟ್ಟಡಗಳು ಯಾವುವು ಎಂದು ಹೇಳಲಾಗದು. ವಿಜಯನಗರದ ಕಾಲದಲ್ಲಿಯಾಗಲಿ, ಮಧುರೆಯ ನಾಯಕರ ಕಾಲದಲ್ಲಿಯಾಗಲಿ ಯಾವ ಹೊಸ ಕಟ್ಟಡವು ಕಟ್ಟಲ್ಪಡಲಿಲ್ಲ. ಉತ್ತರದ ಗೋಪುರವನ್ನು ಮಾತ್ರ ಕೃಷ್ಣದೇವರಾಯ ಕಳಿಂಗದೇಶದ ತನ್ನ ವಿಜಯದ ಸ್ಮಾರಕವಾಗಿ ಕಟ್ಟಿಸಿದ. ಆದರೆ ವಾಸ್ತವಿಕವಾಗಿ ಇದಕ್ಕೂ ಮೊದಲೇ ಗೋಪುರದ ಸ್ವಲ್ಪಭಾಗ ಕಟ್ಟಲ್ಪಟ್ಟು ಅಸಂಪೂರ್ಣವಾಗಿ ಅದರ ಕಟ್ಟಡವನ್ನು ನಿಲ್ಲಿಸಲಾಗಿತ್ತು. ಆದರೆ ಈ ಶತಮಾನದ ಆರಂಭದಲ್ಲಿ ನಾಕುಕೋಟಿ ಚೆಟ್ಟಿಗಳು ಜೀರ್ಣೋದ್ದಾರದ ಹೆಸರಿನಲ್ಲಿ ಅನೇಕ ಹೊಸ ಕಟ್ಟಡಗಳನ್ನು ಕಟ್ಟಿದ್ದಾರೆ. ಇವುಗಳ ಪರಿಣಾಮವಾಗಿ ಮೊದಲಿನ ವಿನ್ಯಾಸವೇ ಬದಲಾಗಿದೆ. ಸಾಧಾರಣವಾಗಿ ಗರ್ಭಗೃಹ ದೇವಾಲಯದ ಹಿಂದಿನ ಭಾಗದಲ್ಲಿದ್ದು ಇತರ ಎಲ್ಲ ದ್ವಾರಗಳೂ ಅದರ ಮುಂದಿರಬೇಕು. ಈ ಗೋಪುರಗಳಲ್ಲಿ ಯಾವುದೂ ಇತರ ದೇವಾಲಯಗಳಲ್ಲಿದ್ದಂತೆ ಗರ್ಭಗೃಹಕ್ಕೆ ಸಮಾನಾಂತರ ರೇಖೆಯಲ್ಲಿ ಇಲ್ಲ. ದಕ್ಷಿಣದ ಗೋಪುರವನ್ನು ಗಮನಿಸಿದಾಗ ದೇವಾಲಯ ದಕ್ಷಿಣಾಭಿಮುಖವಾಗಿದ್ದರಿಬೇಕೆನಿಸುತ್ತದೆ. ಹಾಗಾದರೆ ಉಳಿದ ಎಲ್ಲ ಕಟ್ಟಡಗಳೂ ಗರ್ಭಗೃಹದ ಹಿಂದೆ ಹರಡಿದಂತಾಗುತ್ತದೆ.

	ಇಲ್ಲಿ ಮುಖ್ಯವಾದ್ದು ಚಿತ್ಸಭೆ ಮತ್ತು ಕನಕಸಭೆ. ಚಿತ್ಸಭೆಯ ಮೂರು ಕಡೆ ಮರದಿಂದ ಮಾಡಿದ ಗೋಡೆಗಳಿವೆ. ನಟರಾಜವಿಗ್ರಹವೂ ಆಕಾಶ ಲಿಂಗವೂ ಇರುವುದು ಇದರೊಳಗಡೆಯ ಗರ್ಭಗೃಹದಲ್ಲಿ, ಆದರೆ ದೇವರಿಗೆ ಉತ್ಸವಗಳೂ ಕೈಂಕರ್ಯಗಳೂ ನಡೆಯುವುದು ಕನಕಸಭೆಯಲ್ಲಿ.

	ದೇವಾಲಯದ ನಾಲ್ಕುಗೋಪುರಗಳಲ್ಲಿ ದಕ್ಷಿಣದ ಗೋಪುರದ ಕಟ್ಟಡವನ್ನು ಪಾಂಡ್ಯರ ದೊರೆ ಜಟಾವರ್ಮ ಸುಂದರಪಾಂಡ್ಯ 12-13ನೆಯ ಶತಮಾನಗಳಲ್ಲಿ ಮುಗಿಸಿದ. ಪೂರ್ವ ಮತ್ತು ಪಶ್ಚಿಮದ ಗೋಪುರಗಳನ್ನು ಜಟಾವರ್ಮ ಸುಂದರಪಾಂಡ್ಯನ ಕಾಲದಲ್ಲಿ ಮುಗಿಸಲಾಯಿತಾದರೂ ಅದು ಆರಂಭವಾದ್ದು 12ನೆಯ ಶತಮಾನದ ಮಧ್ಯಭಾಗದಲ್ಲಿ.

	ದೇವಾಲಯದ ಮೂರನೆಯ ಪ್ರಾಕಾರದಲ್ಲಿ ಶಿವಗಂಗಾ ಕೊಳ, ನೂರು ಕಂಬಗಳ ಹಾಗೂ ಸಾವಿರ ಕಂಬಗಳ ಮಂಟಪಗಳು ಹಾಗೂ ದೇವಿಯ ಗುಡಿಗಳು ಇವೆ. ಎರಡನೆಯ ಪ್ರಾಕಾರಕ್ಕೆ ಹೆಚ್ಚುಕಡಿಮೆ ಸಂಪೂರ್ಣವಾಗಿ ಚಾವಣಿಯನ್ನು ಹೊದಿಸಲಾಗಿದೆ. ದೇವಸಭೆ, ನೃತ್ಯಸಭೆ, ಮೂಲಸ್ಥಾನ ಹಾಗೂ ನಾಚ್ಚಿಯಾರ್ ಸನ್ನಿಧಿಗಳಿರುವುದು ಈ ಪ್ರಕಾರದಲ್ಲಿ. 
(ಜಿ.ಬಿ.ಆರ್.; ಎಂ.ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ